ಗ್ರುನೆವಾಲ್ಟ್, ಮ್ಯಾಥಿಯಾಸ್

	ಸು. 1460 - 1528. ಜರ್ಮನಿಯ ಪ್ರಸಿದ್ಧ ಕಲಾವಿದ. ವೂರ್ಜ್‍ಬರ್ಗ್‍ನಲ್ಲಿ ಹುಟ್ಟಿದ. ಮ್ಯಾಥಿಯಾಸ್ ನೀಥಾರ್ಟ್ ಎಂಬುದು ಈತನ ನಿಜವಾದ ಹೆಸರು. ಗೋಥಾರ್ಟ್ ಎಂದೂ ಈತನನ್ನು ಕರೆಯಲಾಗುತ್ತಿತ್ತು. ಈ ಎರಡು ಹೆಸರುಗಳನ್ನೂ ಬಗೆಬಗೆಯಾಗಿ ಉಚ್ಚರಿಸಲಾಗಿದೆ. ಸೆಲೆಜಿನ್‍ಸ್ಟ್ಯಾಟಿನ್ ಪತ್ರಾಗಾರದಲ್ಲಿ 1501 ರಲ್ಲಿ ಮೊಟ್ಟಮೊದಲ ಬಾರಿಗೆ ಈತನ ಹೆಸರು ಕಾಣದೊರೆಯುತ್ತದೆ. 17ನೆಯ ಶತಮಾನದಿಂದ ಈಚೆಗೆ ಈತನ ಹೆಸರೇ ಬದಲಾಗಿ ಬಿಟ್ಟಿದೆ. 1675 ರಲ್ಲಿ ರಚಿತವಾದ ತ್ಯೂತ್‍ಶೆನ್ ಅಕಾಡೆಮಿ ಎಂಬ ಗ್ರಂಥದಲ್ಲಿ ಜೆ. ವಾನ್ ಸಂದ್ರಾರ್ತ್ ಈತನನ್ನು ಗ್ರುನೆವಾಲ್ಟ್, ಮ್ಯಾಥಿಯಾಸ್ ಎಂದು ಹೆಸರಿಸಿದ್ದಾನೆ. ಅಲ್ಲಿಂದೀಚೆಗೆ ಬಹುಮಟ್ಟಿಗೆ ಈ ಹೆಸರೇ ಬಳಕೆಗೆ ಬಂದಿದೆ. ಅದರೆ ಈ ಹೆಸರುಗಳಿಗಿಂತ ಹೆಚ್ಚಾಗಿ ಐಸೆನ್‍ಹೀಮ್ ವೇದಿಕಾ ಚಿತ್ರಕಾರನೆಂದೇ ಈತ ಕೀರ್ತಿತನಾಗಿದ್ದಾನೆ.

	ಈತನ ಆರಂಭ ಜೀವನದ ಬಗೆಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಮಿಡ್ಲ್ ರೈನ್ ಪ್ರದೇಶದ ಕಲಾಮಂದಿರ ಒಂದರಲ್ಲಿ ಈತ ಕಲಾ ಶಿಕ್ಷಣ ಪಡೆದಿದ್ದಿರಬೇಕು. 1485 ರಲ್ಲಿ ಅಶ್ಚಾಫೆನ್‍ಬರ್ಗ್‍ನಲ್ಲಿ ವಾಸವಾಗಿದ್ದನೆಂದೂ 1490 ರಿಂದ ಸುಮಾರು ಒಂದು ದಶಕದ ವರೆಗೆ ಅಜ್ಞಾತವಾಸದಲ್ಲಿದ್ದನೆಂದೂ ಹೇಳಲಾಗಿದೆ. ಈ ಅವಧಿಯಲ್ಲಿ ಈತ ರಚಿಸಿದ್ದಿರಬಹುದಾದ ಯಾವೊಂದು ಚಿತ್ರವೂ ಉಳಿದುಬಂದಿಲ್ಲ. 1501 ರಿಂದ 1520 ರ ವರೆಗೆ - ಕೆಲವರ ಪ್ರಕಾರ 1526 ರ ವರೆಗೆ - ಈತ ಸೆಲಿಜಿನ್‍ಸ್ಟ್ಯಾಟಿನ್ ಪೌರನಾಗಿದ್ದ. ಈ ನಗರ ಮೇನ್ ನದಿಯ ದಡದಲ್ಲಿದದು ಈ ಕಲಾವಿದನಿಗೆ ತುಂಬ ಪ್ರಿಯವಾಗಿ ಪರಿಣಮಿಸಿತ್ತು. ಈ ಅವಧಿಯಲ್ಲಿ ಈತನ ಕಲಾ ಪರಿಣತಿ ಪರಿಪಕ್ವ ಫಲವನ್ನು ನೀಡಿತು.

	ಉಪಲಬ್ಧವಿರುವ ಈತನ ಸುಮಾರು ನಲವತ್ತು ಕೃತಿಗಳಲ್ಲಿ ಮೊದಲನೆಯದೆಂದರೆ ಲಿಂಡೆನ್‍ಹಾರ್ಟ್‍ನಲ್ಲಿರುವ ವೇದಿಕಾ ಚಿತ್ರ. ಇದರ ರಚನೆಯ ಕಾಲ ಸು. 1503. ಕ್ರಿಸ್ತನನ್ನು ಅಪಹಾಸ್ಯ ಮಾಡಿದುದು ಮತ್ತು ಶಿಲುಬೆಗೆ ಹಾಕಿದುದು - ಈ ಪ್ರಸಂಗಗಳನ್ನು ವಸ್ತುವಾಗಿಸಿಕೊಂಡು ರಚಿಸಿದ ಚಿತ್ರಗಳಲ್ಲಿ ಈತನ ಕಲಾ ಪ್ರತಿಭೆ ಸ್ಪಷ್ಟವಾಗಿ ಬಣ್ಣದ ವೈಶಿಷ್ಟ್ಯಪೂರ್ಣ ಬಳಕೆ, ಭಾವಾನುಭಾವಗಳನ್ನು ತೆರೆದು ತೋರುವ ರೇಖಾಚಿತ್ರಣ ಕೌಶಲ, ನೆಳಲು ಬೆಳಕುಗಳ ವಿಧಾನದ ಪ್ರಭಾವಪೂರ್ಣ ಬಳಕೆ - ಇವೇ ಮೊದಲಾದ ಗುಣಗಳು ಎದ್ದು ಕಾಣುತ್ತವೆ. ಇಲ್ಲಿಂದ ಪ್ರಾರಂಭವಾದ ಯಶಸ್ಸಿನ ಸರಣಿ ಅಭೂತಪೂರ್ವವಾಗಿ ಮುಂದುವರಿಯಿತು. ಈತನ ಪ್ರತಿಭೆಯನ್ನು ಗುರುತಿಸಿದ ನಾಲ್ವರು ಪ್ರಮುಖರೆಂದರೆ ಮೇನ್ಜ್‍ನ ಆರ್ಚ್‍ವಿಷಪ್ ಉಲ್‍ರಿಜ್ ಫಾನ್ ಜಿಮಮಿಂಜೆನ್, ಫ್ರಾಂಕ್‍ಫರ್ಟಿನ ಜೇಕಬ್ ಹೆಲ್ಲರ್, ಆಲ್‍ಬ್ರೆಕ್ಟ್ ಕಾರ್ಡಿನಲ್ ಫಾನ್ ಬ್ರಾಂಡೆನ್‍ಬರ್ಗ್ ಮತ್ತು ಆಬಟ್ ಗುಯಿಡೊ ಗುಯೆರ್ಡಿ. ಉಲ್‍ರಿಜ್ ಈತನನ್ನು ಆಸ್ಥಾನ ಕಲಾವಿದನನ್ನಾಗಿ ನೇಮಿಸಿಕೊಂಡಿದ್ದ. ಈತನ ಕೃತಿಗಳಲ್ಲಿ ಬಹುಮಟ್ಟಿಗೆ ಬರ್ಲಿನ್‍ನಲ್ಲಿಯೂ ಉಳೀದವು ಡ್ರೆಸ್‍ಡೆನ್, ಎರ್ಲಾಂಜೆನ್, ಕಾರ್ಲ್‍ರೂಹ್, ಆಕ್ಸ್‍ಫರ್ಡ್, ಪ್ಯಾರಿಸ್, ಸ್ಟಾಕೋಮ್, ಫ್ರಾಂಕ್‍ಫರ್ಟ್, ಮ್ಯೂನಿಕ್, ಕೋಲ್‍ಮಾರ್ ಮೊದಲಾದ ನಗರಗಳಲ್ಲಿನ ವಸ್ತುಸಂಗ್ರಾಲಯಗಳಲ್ಲಿಯೂ ಸೇರಿಕೊಂಡಿವೆ. ಸಂತಲಾರೆನ್ಸ್ ಮತ್ತು ಸಿರಿಯಾಕ್ (1512 - 19), ಮೆಡೊನಾ ಮತ್ತು ಶಿಶು (1516 - 17) ಐಸೆನ್ ಹೀಮ್ ವೇದಿಕಾ ಚಿತ್ರ (1516), ಸಂತ ಎರಾಸ್‍ಮಸ್ ಮತ್ತು ಸಂತ ಮಾರಿಸ್ (1516 - 18), ಹಿಮದ ಪವಾಡ (1517 - 19), ಪಶ್ಚಾತ್ತಾಪ ಮತ್ತು ಕ್ರಿಸ್ತ ಶಿಲುಬೆಯನ್ನು ಹೊತ್ತು ಸಾಗುತ್ತಿರುವುದು (1520 - 25) - ಇವೇ ಮೊದಲಾದ ಚಿತ್ರಗಳು ಈತನ ಕೀರ್ತಿಪತಾಕೆಗಳೆನಿಸಿಕೊಂಡಿವೆ. ಈತನಿಂದ ರಚಿತವಾದ ವೇದಿಕಾ ಚಿತ್ರಗಳನ್ನು ತಂತಮ್ಮ ಚರ್ಚುಗಳಲ್ಲಿ ಅಳವಡಿಸಿಕೊಳ್ಳಲು ಧಾರ್ಮಿಕ ಸಂಸ್ಥೆಗಳು ನಾ ಮುಂದೆ ತಾ ಮುಂದೆ ಎಂದು ಬಂದುವು. ಬಗೆಬಗೆಯ ಚಿತ್ರಗಳಿಂದ ಈತ ಕಲಾಪ್ರೇಮಿಗಳ ಮನಸ್ಸನ್ನು ಸೂರೆಗೊಂಡ. 

	ಈತ ಮಠಾಧಿಪತಿಗಳ, ಶ್ರೀಮಂತರ, ಆಶ್ರಯದಲ್ಲಿದ್ದರೂ ತನ್ನ ವ್ಯಕ್ತಿತ್ವವನ್ನೂ ವ್ಯಕ್ತಿಸ್ವಾತಂತ್ರ್ಯವನ್ನೂ ಬಲಿಗೊಟ್ಟಿರಲಿಲ್ಲ. ಸುಧಾರಣಾವಾದಕ್ಕೆ, ರೈತರ ಚಳುವಳಿಗೆ ಬೆಂಬಲವಿತ್ತನೆಂಬ ಕಾರಣಕ್ಕಾಗಿ ಈತನನ್ನು ಆಸ್ಥಾನದಿಂದ ತೆಗೆಯಲಾಯಿತು. 1926 - 27 ರ ನಡುವಣ ಅವಧಿಯಲ್ಲಿ ಫ್ರಾಂಕ್‍ಫರ್ಟ್ ಆನ್ ಮೇನ್‍ನಲ್ಲಿ ಈತನಿಗೆ ರಚಿಸುವ ಕಾರ್ಯದಲ್ಲಿ ಈತ ತೊಡಗಿದ. 1528 ರಲ್ಲಿ ಹ್ಯಾಲೆಗೆ ಹಿಂದಿರುಗಿದ. ಅದೇ ವರ್ಷ ಅಲ್ಲಿಯೇ ತೀರಿಕೊಂಡ. 

	ಈತನ ಕೃತಿಗಳಲ್ಲಿ ಧಾರ್ಮಿಕತೆಯನ್ನು ಮೀರಿ ನಿಲ್ಲುವ ದರ್ಶನವೊಂದು ಕಾಣುತ್ತದೆ. ಇವು ಜರ್ಮನ್ ಗಾತಿಕ್ ಶೈಲಿಯ ಪರಮೋತ್ಕರ್ಷದ ಪ್ರತೀಕಗಳೆಂದು ವಿಮರ್ಶಕರು ಹೊಗಳಿದ್ದಾರೆ. ಸಮಕಾಲೀನರಾದ ಆಲ್‍ಬ್ರೆಕ್ಟ್ ಡ್ಯೂರರ್‍ನಂಥ ಪ್ರಸಿದ್ಧ ಕಲಾವಿದರು ಕೂಡ ಇಟಲಿಯ ಪುನರುದಯ ಕಾಲದ ಸಾಧನೆಯ ಹಾದಿಯಲ್ಲೇ ಸಾಗಿದರಾದರೂ ಗ್ರುನೆವಾಲ್ಟ್ ಆ ಹಾದಿಯನ್ನು ಹಿಡಿಯಲಿಲ್ಲ. ತನ್ನ ಉದೇಶಕ್ಕೆ ಹೊಂದುವಂತೆ ತನ್ನದೇ ಆಗ ರೀತಿಯಲ್ಲಿ ಕಲಾ ಮಾಧ್ಯಮವನ್ನು ಅಳವಡಿಸಿಕೊಂಡು, ಧಾರ್ಮಿಕ ಸ್ತ್ಯಗಳ ಪರಿವೇಶದಲ್ಲಿ ಮೆರೆಯುವ ಆಧ್ಯಾತ್ಮಿಕ ಸಂದೇಶ ಮನಮುಟ್ಟುವಂತೆ ಚಿತ್ರಿಸಿದ್ದು ಈತನ ಸಾಧನೆ. ಈ ಸಾಧನೆ ವೈಯಕ್ತಿಕ ಸಾಧನೆ ಮಾತ್ರವಾಗಿ ಉಳಿಯದೆ ಆ ಯುಗದ ಸಾಧನೆಯ ಪರಮೋತ್ಕರ್ಷದ ಪ್ರತೀಕವೂ ಆಯಿತು. ರೇಖಾವಿನ್ಯಾಸ ಕೌಶಲದಲ್ಲಿ. ತೀವ್ರಭಾವಾನುಭವಗಳ ನಿರೂಪಣೆಯಲ್ಲಿ ಆದಿಕಾಲೀನ, ಜರ್ಮನ್ ಚಿತ್ರಕಲೆಯನ್ನು ಹೋಲುವಂತೆ ಕಂಡುಬಂದರೂ ನೆರಳು - ಬೆಳಕುಗಳ ವಿನ್ಯಾಸದಲ್ಲಿ, ದೇಶ - ಕಾಲ - ಆಯಾಮಗಳ ಸೃಷ್ಟಿಯಲ್ಲಿ, ಪರಿಣಾಮಕಾರಿ ಭಂಗಿಗಳನ್ನೇ ರೂಪಿಸುವಲ್ಲಿ, ಪ್ರಭಾವಶಾಲಿ, ವರ್ಣಸಂಯೋಜನೆಯಲ್ಲಿ, ಶಿಲ್ಪಸಂಬಂಧವಾದ ನಿರ್ದುಷ್ಟತೆಯಲ್ಲಿ, ಭಾವದೀಪ್ತಿಯಲ್ಲಿ ಈತನಿಗೆ ದೊರೆತಿರುವ ಅದ್ಭುತ ಯಶಸ್ಸು ಈತನನ್ನು ಅಮರನನ್ನಾಗಿಸಿದೆ. ಇಟಲಿಯ ಪ್ರಭಾವವನ್ನು ಈತ ಮೆಟ್ಟಿ ನಿಂತನೆಂಬುದಕ್ಕೂ ಈ ಅಂಶಗಳು ಸಾಕ್ಷಿ.

	ಐಸೆನ್‍ಹೀಮ್ ವೇದಿಕಾಚಿತ್ರ ಜಗತ್ತಿನ ಅತ್ಯತ್ತಮ ವರ್ಣಚಿತ್ರಗಳಲ್ಲಿ ಒಂದೆಂದು ಹೆಸರುಗಳಿಸಿದೆ. ಇದು ಈತನ ಅತ್ಯತ್ಕøಷ್ಟ ರಚನೆ. ಎಂಟು ಅಡಿ ಎತ್ತರವಿರುವ ಇದರ ರಚನೆ ಅದ್ಭುತವಾಗಿದೆ. ಇದರಲ್ಲಿ ಅನೇಕ ಫಲಕಗಳು ಇದ್ದು, ಅವನ್ನು ಕೀಲುಗಳಿಂದ ಕೂಡಿಸಲಾಗಿದೆ. ಅವುಗಳ ಹಿಂಬದಿಯಲ್ಲಿ ಬೇರೊಬ್ಬ ಶಿಲ್ಪಕೃತಿ ಕಾಣಿಸಿಕೊಳ್ಳುತ್ತವೆ. ಆ ರೀತಿಯಲ್ಲಿ ಈ ಭಾಗಗಳನ್ನು ಜೋಡಿಸಲಾಗಿದೆ. ಮುಚ್ಚಿದಾಗ ಹೊರಪಾಶ್ರ್ವದಲ್ಲಿ ಕ್ರಿಸ್ತನನ್ನು ಶಿಲುಬೆಗೆ ಏರಿಸಿರುವ ಭಯಂಕರ ದೃಶ್ಯ ಕಾಣುತ್ತದೆ. ಕ್ರಿಸ್ತನ ವೇದನೆ ಹೃದಯ ವಿದ್ರಾವಕವಾಗಿ ಮೂಡಿಬಂದಿದೆ. ಅಷ್ಟು ವಾಸ್ತವವಾಗಿ ಈ ಚಿತ್ರ ಕಂಡರಣೆಗೊಂಡಿದೆ. ಒಳಪಾಶ್ರ್ವದ ಫಳಕಗಳಲ್ಲಿ ಮೇರಿಯ ಆತ್ಮಾನಂದ, ಕ್ರಿಸ್ತನ, ಪುನರುತ್ಥಾನ - ಇವೇ ಮೊದಲಾದ ಧಾರ್ಮಿಕ ಚಿತ್ರಗಳನ್ನು ರೂಪಿಸಲಾಗಿದೆ.		(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ